My other links
Archives of Kannada Radio Program
http://www.itsdiff.com/Kannada.html
(Kannada Songs, interviews with C Ashwath, PB Srinivas and more)
ರಸಿಕರ ರಾಜ್ಯ
For my Kannada blog please visit http://sampada.net/blog/rasikara-rajya
My first acting performance in a short movie (15 min): Please click here -> Kelade Nimageega - Short Movie
http://www.itsdiff.com/Kannada.html
(Kannada Songs, interviews with C Ashwath, PB Srinivas and more)
ರಸಿಕರ ರಾಜ್ಯ
For my Kannada blog please visit http://sampada.net/blog/rasikara-rajya
My first acting performance in a short movie (15 min): Please click here -> Kelade Nimageega - Short Movie
Sunday, March 14, 2010
Review of Dr, U.R Ananthamurthy's novel Bharathipura (in Kannada)
Click here to read my English article about the book ananta mukhada murthy
(UR Ananthamurthy - A Multifaceted Icon) here
ಆದರ್ಶವಾದಿಗೆ ಭಾರತಿಪುರದಲ್ಲಿ ಸವಾಲುಗಳು
ಮಧು ಕೃಷ್ಣಮೂರ್ತಿ
ಈ ನನ್ನ ಲೇಖನ ಮೊದಲು ಪ್ರಕಟಗೊಂಡದ್ದು ಈ ಪುಸ್ತಕದಲ್ಲಿ. ಅನಂತಮುಖದಮೂರ್ತಿ: ೨೦೦೯. ಸಂಪಾದಕರು: ಅಹಿತಾನಲ (ನಾಗ ಐತಾಳ). ಪ್ರಕಾಶಕರು: ಸಾಹಿತ್ಯಾಂಜಲಿ, ಕ್ಯಾಲಿಫೊರ್ನಿಯ ಮತ್ತು ಅಭಿನವ, ಬೆಂಗಳೂರು.
ಹೊರದೇಶದಲ್ಲಿ ನಾವು ಸ್ನೇಹಿತರೆಲ್ಲ ಸೇರಿದಾಗ ಭಾರತದಲ್ಲಿನ ಸಾಮಾಜಿಕ ಸ್ಥಿತಿ ಮತ್ತು ಅದರ ಸುಧಾರಣೆಗೆ ಏನೇನು ಕೆಲಸ ಮಾಡಬಹುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಅಮೇರಿಕದಲ್ಲಿ ಒಬ್ಬ ಸಾಮಾನ್ಯ ಪ್ರಜೆಯೂ ಕೂಡ ಹೇಗೆ ದಿನ ನಿತ್ಯದ ಬದುಕಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಅನುಭವಿಸುತ್ತಾನೆ ಎಂಬುದು ಕಂಡಾಗ ನಮ್ಮ ಕಣ್ಮುಂದೆ ಬರುವುದು ಭಾರತದಲ್ಲಿನ ಸಾಮಾನ್ಯ ಪ್ರಜೆಯ ಸ್ಥಿತಿ. ನಿಖರವಾಗಿ ಹೇಳಬೇಕೆಂದರೆ ನಮ್ಮ ಕಣ್ಮುಂದೆ ಬರುವುದು ನಮ್ಮ ಮನೆಯಲ್ಲಿ ಅಥವಾ ನಮ್ಮ ಬಂಧುಮಿತ್ರರ ವಲಯದಲ್ಲಿ ಅನುಭವಿಸದೆ ಇದ್ದ ಈ ಸವಲತ್ತುಗಳು ಮತ್ತು ಅನುಭವಿಸಿದ ಕಷ್ಟ ದುಃಖಗಳು. ಹೆಚ್ಚಾಗಿ ಬರುವ ಅಭಿಪ್ರಾಯಗಳು ಈ ವಿಷಯಗಳ ಸುತ್ತ ಇರುತ್ತವೆ ಎಂದು ನಾನು ಕಂಡಿದ್ದೇನೆ. ಬೆಂಗಳೂರಿನ ವಾಯುಮಾಲಿನ್ಯ, ರಾಜಕೀಯದಲ್ಲಿಯ ಭ್ರಷ್ಟತೆ, ಮುಂದುವರಿದ ರಾಷ್ಟಗಳಲ್ಲಿರುವಂತೆ ಭಾರತದಲ್ಲಿಲ್ಲದ ಆಧುನಿಕತೆ, ಜನರಲ್ಲಿ ಕಾಣೆಯಾಗುತ್ತಿರುವ ಪೌರ ಪ್ರಜ್ಞೆ, ಉಗ್ರಗಾಮಿಗಳ ದಮನ ಇವೇ ಮುಂತಾದ ದೈನಂದಿನ ಬದುಕಿನ ಕಾಳಜಿಗಳು. ಬೆಂಗಳೂರಿನ ಸಂಚಾರ ಸ್ಥಿತಿಯನ್ನು ಸುಧಾರಿಸಲು ರಸ್ತೆಗಳನ್ನು ಅಗಲಮಾಡಬೇಕು. ಹಾಗೆ ಮಾಡುವಾಗ ಅಗತ್ಯವಿದ್ದರೆ ಬದಿಯ ಅಂಗಡಿ ಮನೆಗಳನ್ನು ಒಡೆಯಬೇಕು. ಆ ಅಸ್ತಿಯ ಮಾಲಿಕರಿಗೆ ಅಂದಿನ ಬೆಲೆಗನುಸಾರವಾಗಿ ಪರಿಹಾರ ಧನ ನೀಡುವುಷ್ಟೇ ಸಮಾಜ ಹಾಗು ಸರಕಾರದ ಕರ್ತವ್ಯ - ಎಂದೆಲ್ಲ ಸಲಹೆಗಳು ಬರುತ್ತವೆ. ಅದೂ ಇಷ್ಟೆಲ್ಲ ಯಾಕೆ? ಬೆಂಗಳೂರಿನಲ್ಲಿರುವ ನವ ಶ್ರೀಮಂತರುಗಳು ಕಾರಲ್ಲಿ ಓಡಾಡುವಾಗ ತೊಂದರೆಯಾಗದಿರಲಿ ಎಂದು. ನ್ಯಾಯವಾಗಿ ನೋಡಿದರೆ ಮೇಲಿನ ಸಮಸ್ಯೆಗಳು ಭಾರತದ ಮುಕ್ಕಾಲು ಭಾಗದ ಜನರಿಗೆ ಇವಾವುದೂ ಸಮಸ್ಯೆಗಳೇ ಅಲ್ಲ. ಅವರಿಗೆ ಎಲ್ಲಕ್ಕಿಂತಲೂ ಮುಖ್ಯವಾಗಿ ಬೇಕಾಗಿರುವುದು ಎರಡು ಹೊತ್ತಿನ ಊಟ ಮತ್ತು ಅವರ ಆತ್ಮಾಭಿಮಾನದ ಬೆಳೆವಣಿಗೆ. ಈ ಹಿನ್ನಲೆಯಲ್ಲಿ ಯು. ಆರ್. ಅನಂತಮೂರ್ತಿಯವರ ಭಾರತಿಪುರ ಕಾದಂಬರಿಯು ಬಹಳ ಮುಖ್ಯವೆನಿಸುತ್ತದೆ.
ಕಥಾನಾಯಕ ಜಗನ್ನಾಥ ಶ್ರೀಮಂತ ಜಮೀನುದಾರರ ಪುತ್ರ. ಬಹುಶಃ ಇಡೀ ಊರಿಗೆ ಅಗ್ರ ಸ್ಥಾನದಲ್ಲಿರುವ ಶ್ರೀಮಂತ ಮನೆತನದ ವಾರಸುದಾರ. ಎಲ್ಲರು ಈತನನ್ನು ಬಹಳ ಗೌರವ ಮತ್ತು ಆದರಗಳಿಂದ ಕಾಣುತ್ತಾರೆ. ಈತ ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೆ ಹೋಗುತ್ತಾನೆ. ಉದಾರವಾದಿಯಾದ ಜಗನ್ನಾಥ ಲಂಡನ್ನಿನಲ್ಲಿ ಎಲ್ಲ ಅನುಭಗಳಲ್ಲೂ ಭಾಗಿಯಾಗುತ್ತಾನೆ. ಮಾರ್ಗರೇಟ್ ಎಂಬ ಸ್ಥಳಿಯ ಹೆಣ್ಣೊಂದಿಗೆ ಇವನ ಸಂಬಂಧವೂ ಬೆಳೆಯುತ್ತದೆ. ಗುಜುರಾತಿ ತಂದೆ ಮತ್ತು ಬ್ರಿಟೀಷ್ ತಾಯಿಯ ಮಗಳಾದ ಮಾರ್ಗರೇಟ್ ಭಾರತದ ಸಂಸ್ಕೃತಿಯ ಬಗ್ಗೆ ಆಸಕ್ತಿ ಮತ್ತು ತಿಳುವಳಿಕೆ ಉಳ್ಳವಳಾಗಿರುತ್ತಾಳೆ. ಹೀಗಾಗಿ ಅವಳೊಂದಿಗೆ ಗಾಢವಾದ ಸಂಬಂಧ ಬೆಳೆದು ಅವಳು ಜಗನ್ನಾಥನ ಅಂತರಾಳವನ್ನು ಹಂಚಿಕೊಳ್ಳುವ ಗೆಳತಿಯಾಗುತ್ತಾಳೆ. ಲಂಡನ್ನಿನಲ್ಲಿ ಬೆಂಗಳೂರಿನವನೆ ಆದ ಚಂದರ್ ಎಂಬ ಸ್ಫರ್ಧಿಯೂ ಮಾರ್ಗರೇಟಳ ಸಾಂಗತ್ಯಕ್ಕೆ ಹೊಂಚುಹಾಕುತ್ತಿರುತ್ತಾನೆ. ಇವನಾದರೋ ಜಗನ್ನಾಥನ ಪ್ರಕಾರ ಒಬ್ಬ ಹಿಪ್ಪೊಕ್ರೇಟ್. ಈ ಮೂವರು ಆಗಾಗ್ಗೆ ಫಿಲಾಸಫಿ, ಅಂತರಾಷ್ಟ್ರೀಯ ಸಾಹಿತ್ಯ ಇವೇ ಮುಂತಾದ ಇಂಟಲೆಕ್ಚುವಲ್ ವಿಷಯಗಳನ್ನು ಬೀರು ಕುಡಿಯುತ್ತ ಚರ್ಚಿಸುವುದರಲ್ಲಿ ನಿರತರಾಗಿರುತ್ತಾರೆ.
ಲಂಡನ್ನಿನಲ್ಲಿ ಒಮ್ಮೆ ಮಾರ್ಗರೇಟ್ ಜಗನ್ನಾಥನಲ್ಲಿ ಉತ್ಕಟವಾದ ಒಂದು ಜಿಜ್ಞಾಸೆಯನ್ನು ಪ್ರಚೋದಿಸುತ್ತಾಳೆ. ಅದೇನೆಂದರೆ ಜಗನ್ನಾಥನು ತಾನು ಹೆಚ್ಚು ಪ್ರಾಮಾಣಿಕನಾದ ಮಾನವನಾಗಬೇಕು ಎನ್ನುವುದು. ತನ್ನ ಪೊರೆಗಳನ್ನೆಲ್ಲ ಕಳಚಿ ತನ್ನ ನಿಜವಾದ ಸತ್ವವನ್ನು ಅನುಭವಿಸಬೇಕು ಎನ್ನುವುದು. ಇದಾದ ಕೂಡಲೆ ಜಗನ್ನಾಥ ದೃಢ ಮನಸ್ಸಿನಿಂದ ಗಂಟುಮೂಟೆ ಕಟ್ಟಿಕೊಂಡು ಭಾರತಿಪುರಕ್ಕೆ ಹಿಂದಿರುಗುತ್ತಾನೆ. ಲಂಡನ್ನಿನಲ್ಲೆ ಉಳಿಯುವ ಮಾರ್ಗರೇಟ್ ಕಥೆಯ ಉದ್ದಕ್ಕೂ ತನ್ನ ಇರುವಿಕೆಯನ್ನು ತೋರಿಸುತ್ತಿರುತ್ತಾಳೆ - ಜಗನ್ನಾಥನ ನೆನಪಿನ ಮೂಲಕ ಮತ್ತು ಜಗನ್ನಾಥ ಅವಳಿಗೆ ಬರೆಯುವ ಪತ್ರಗಳ ಮೂಲಕ.
ಭಾರತಿಪುರದ ಸ್ಥಿತಿ ಎಂತಹುದೆಂದರೆ ಅದೊಂದು ತಟಸ್ಥವಾದ ಸಮಾಜ. ಪಟ್ಟಣದ ಅಸ್ತಿತ್ವಕ್ಕೆ ಆಧಾರ ಆ ಊರಿನಲ್ಲಿರುವ ಮಂಜುನಾಥನ ದೇವಾಲಯ ಮತ್ತು ಅದರ ಮಹಿಮೆಯ ಕೃಪಾಕಟಾಕ್ಷ. ಭಾರತಿಪುರದ ಮೇಲೆ ಮಂಜುನಾಥನ ಮಹಿಮೆಯ ಹಿಡಿತ ಪ್ರಭಲವಾದುದು. ಮಂಜುನಾಥನಷ್ಟೇ ಅಲ್ಲದೆ ಆ ಪಟ್ಟಣದಲ್ಲಿ ಭೂತರಾಯ ಎಂಬ ಗ್ರಾಮ್ಯ ದೇವತೆಯು ಜನರ ಮೇಲೆ ತನ್ನ ಹಿಡಿತವಿಟ್ಟುರುತ್ತದೆ. ಭೂತರಾಯನು ಒಬ್ಬ ಮಾನವನ ಮೇಲೆ ಆವಾಹನೆಯಾಗುವ ಮೂಲಕ ಜನರಿಗೆ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾನೆ. ಈತ ನ್ಯಾಯವನ್ನು ನಿರ್ಧರಿಸುತ್ತಾನೆ. ತಪ್ಪು ಮಾಡಿದವರು ಈತನ ಎದುರು ಬಂದರೆ ರಕ್ತ ಕಾರಿ ಸಾಯುತ್ತಾರೆ ಎಂಬ ಭಯದಿಂದ ಜನರು ತಪ್ಪು ಮಾಡುವುದಿಲ್ಲ. ಹೀಗೆ ಮಂಜುನಾಥನ ಮಹಿಮೆಯಿಂದ ಮತ್ತು ಭೂತರಾಯನ ಭಯದಿಂದ ಜನರು ಸಜ್ಜನರಾಗಿ ಬಾಳುತ್ತಿದ್ದಾರೆ ಎಂಬುದು ಭಾರತಿಪುರದ ಸಾಮಾನ್ಯ ಜನರ ನಂಬಿಕೆ. ಈ ಕಾರಣಕ್ಕಾಗಿ ಮಂಜುನಾಥ-ಭೂತರಾಯರ ಪ್ರಭಾವಕ್ಕೆ ಕುಂದು-ಕಳಂಕ ಬರದಂತೆ ಕಾಪಾಡುವುದು ಭಾರತಿಪುರದ ಸಮಾಜಕ್ಕೆ ಬಹಳ ಮುಖ್ಯವಾಗಿದೆ.
ತನ್ನ ಮೂಲ ವ್ಯಕ್ತಿತ್ವವನ್ನು ಪ್ರಾಮಾಣಿಕವಾಗಿ ಕಂಡುಕೊಳ್ಳುವ ಜಗನ್ನಾಥನ ಉದ್ದೇಶದೊಂದಿಗೆ ಹೆಣೆದುಕೊಂಡೇ ಇನ್ನೊಂದು ಉದ್ದೇಶವೂ ತೆರೆದುಕೊಳ್ಳತೊಡಗುತ್ತದೆ. ಅಸ್ಪೃಶ್ಯತೆ ಎಂಬ ಸಾಮಾಜಿಕ ಕಾಹಿಲೆಯನ್ನು ತೊಡೆದುಹಾಕಿ ಹರಿಜನರನ್ನು ತುಳಿತದಿಂದ ಮುಕ್ತಗೊಳಿಸುವುದು ಜಗನ್ನಾಥನ ಉದ್ದೇಶ. ಭಾರತದಲ್ಲಿ ಬಹುತೇಕ ಕಡೆಗಳಲ್ಲಿ ನಡೆಯುವಂತೆ ಈ ಊರಲ್ಲಿ ಸಹ ದಲಿತರ ಮೇಲೆ ದಬ್ಬಾಳಿಕೆ ಮತ್ತು ಅಸ್ಪೃಶ್ಯತೆ ಪ್ರಚಲಿತವಾಗಿರುತ್ತದೆ. ಮಂಜುನಾಥನ ದೇವಾಲಯವನ್ನು ಇವರು ಪ್ರವೇಶಿಸುವಂತಿಲ್ಲ. ಆತ್ಮಾಭಿಮಾನದಿಂದ ವಂಚಿತರಾದ ದಲಿತರು, ಆತ್ಮವಿಶ್ವಾವಿಲ್ಲದೆ ಈ ಹೀನ ವ್ಯವಸ್ಥೆಯ ಮುಂದುವರಿಕೆಯಲ್ಲಿ ಯಾವುದೇ ಪ್ರತಿಭಟನೆ ಇಲ್ಲದೇ ಭಾಗಿಗಳಾಗಿರುತ್ತಾರೆ. ಮಂಜುನಾಥ-ಭೂತರಾಯರ ಜೋಡಿ ಮಹಿಮೆಯು ಈ ವ್ಯವಸ್ಥೆಯನ್ನು ಜೀವಂತವಾಗಿಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ ಎಂಬುದು ಜಗನ್ನಾಥನ ಅನಿಸಿಕೆ.
ಹೊಲೆಯರಿಗೆ ಈ ವ್ಯವಸ್ಥೆಯನ್ನು ವಿರೋದಿಸಿದರೆ ತಮಗೆ ಕೇಡು ಉಂಟಾಗುವುದು ಎಂಬ ಮುಗ್ಧ ನಂಬಿಕೆ. ಈ ಸ್ಥಿತಿಯನ್ನು ಕಂಡ ಜಗನ್ನಾಥನು ಈ ಸಮಾಜದಲ್ಲಿ ಸುಧಾರಣೆ ಆಗಬೇಕಾದರೆ ಮಂಜುನಾಥನ ಪ್ರಭಲವಾದ ಹಿಡಿತವನ್ನು ಸಡಿಲಿಸಬೇಕು ಎಂದೆನಿಸುತ್ತದೆ. ಸಮಾಜ ತನ್ನಲ್ಲಿಯ ಆತ್ಮವಿಶ್ವಾಸ ಬೆಳೆಸಿಕೊಂಡು ತನ್ನ ಸಾಮರ್ಥ್ಯವನ್ನು ಬಳಸಿಕೊಂಡಾಗ ಮಾತ್ರ ಸಮಾಜ ಪರಿವರ್ತನೆಯಾಗುತ್ತದೆ ಎಂದು ಆಲೋಚಿಸುತ್ತಾನೆ. ದಲಿತರ ಸಾಮಾಜಿಕ ಸ್ಥಿತಿಯನ್ನು ಉತ್ತಮ ಗೊಳಿಸಬೇಕಾದರೆ ಅವರು ತಮ್ಮನ್ನು ಕಟ್ಟಿಹಾಕಿರುವ ಸಂಕೋಲೆಗಳಿಂದ ಮುಕ್ತರಾಗಬೇಕಾದರೆ, ದಲಿತರು ಸಾಂಕೇತಿಕವಾಗಿ ಸಧ್ಯದ ಸಾಮಾಜಿಕ ಪದ್ಧತಿಯನ್ನು ಧಿಕ್ಕರಿಸಬೇಕು - ಹೊಲೆಯರು ದೇವಸ್ಥಾನದ ಒಳಗೆ ಪ್ರವೇಶಿಸುವಂತೆ ಮಾಡಬೇಕು. ಇದು ಜಗನ್ನಾಥನ ಉದ್ದೇಶ.
ಭಾರತಿಪುರವು ಭಾರತದ ಸಮಾಜವನ್ನು ಅನೇಕ ವಿಧದಲ್ಲಿ ಪ್ರತಿನಿಧಿಸುತ್ತದೆ. ಅಲ್ಲಿ ಧಾರ್ಮಿಕ ನಂಬಿಕೆ ಇದೆ. ಅಡಿಕೆ ತೋಟವೇ ಮೊದಲಾದ ಕೃಷಿಕ ಜೀವನವಿದೆ. ಭಾರತದಲ್ಲಿ ಅವ್ಯಾಹತವಾಗಿ ಕಾಣುವ ಹೊಲಸು, ಮಾಲಿನ್ಯ ಊರ ತುಂಬ ಇದ್ದು, ಇದು ಒಂದು ಧಾರ್ಮಿಕ ಕ್ಷೇತ್ರವೆ? ಎಂಬ ಅನುಮಾನ ಹುಟ್ಟುತ್ತದೆ. ಈ ಹಿನ್ನೆಲೆಯನ್ನು ಬಳಸಿಕೊಂಡು ಅನಂತಮೂರ್ತಿಯವರು ಭಾರತದಲ್ಲಿನ ಸಾಮಾಜಿಕ ತೊಂದರೆಗಳು ಮತ್ತು ಅವನ್ನು ನಿವಾರಿಸುವ ಕಾರ್ಯದಲ್ಲಿ ಎದುರಿಸಬೇಕಾದ ಸವಾಲುಗಳನ್ನುದ್ದೇಶಿಸಿ ಒಂದು ಪ್ರಭಾವಶಾಲಿ ಕಾದಂಬರಿಯನ್ನು ಸೃಷ್ಟಿಸಿದ್ದಾರೆ.
ಭಾರತೀಯ ಸಾಹಿತ್ಯ, ಧಾರ್ಮಿಕ ನಂಬಿಕೆಗಳು, ಪುರಾಣ, ಸಂಸ್ಕೃತಿ ಇವೆಲ್ಲವನ್ನು ಚೆನ್ನಾಗಿ ಅರಿತು ಬಳಸಿಕೊಂಡಿರುವ ಅನಂತಮೂರ್ತಿಯವರ ಲೇಖನಿಯ ಸಾಮರ್ಥ್ಯ ಬಹಳ ಮೆಚ್ಚುಗೆ ಹುಟ್ಟಿಸುವಂತಹುದು. ಅಷ್ಟೆ ಅಲ್ಲದೆ ವಿಶ್ವದ ಅನೇಕ ಕೃತಿಗಳನ್ನು ಅರ್ಥಮಾಡಿಕೊಂಡು ಅದನ್ನು ಭಾರತೀಯ ಪರಿಸರ ಹಾಗು ಸನ್ನಿವೇಶಗಳಿಗೆ ಅಳವಡಿಸಿಕೊಳ್ಳುತ್ತ ಪೂರ್ವ ಪಶ್ಚಿಮಗಳ ನಂಬಿಕೆಗಳು ಘರ್ಷಿಸುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿ ಅದರಿಂದ ಹೊರಬರುವ ವೈಚಾರಿಕತೆಯನ್ನು ಚೆನ್ನಾಗಿ ನಿರೂಪಿಸಿದ್ದಾರೆ.
ಈ ಕಥೆಯಲ್ಲಿ ಅನಂತಮೂರ್ತಿಯವರ ಇತರ ಕಾದಂಬರಿಗಳಲ್ಲಿ ಕಂಡು ಬರುವಂತೆ ಕಾಮದಿಂದ ಪ್ರೇರಿತವಾದ ಪಾತ್ರಗಳು, ಸನ್ನಿವೇಶಗಳು ಎದ್ದು ಕಾಣುತ್ತವೆ. ಹರಿಜನರು ಮತ್ತು ದಲಿತರು ಶೋಷಣೆಯಿಂದ ಮುಕ್ತರಾಗುವ ಕಥೆಯಲ್ಲಿ ದಲಿತನೊಬ್ಬನು ಮೇಲ್ಜಾತಿಯ ಹೆಣ್ಣೊಂದಿಗೆ ಲೈಂಗಿಕ ಸಂಬಧ ಹೊಂದುವುದು ಒಂದು ಪ್ರಭಲವಾದ ಸಂಕೆತದಂತೆ ಬಳಸಿರುವ ಉದಾಹರಣೆಗಳು ಕನ್ನಡ ಸಾಹಿತ್ಯದಲ್ಲಿ ಇವೆ. ಅನಂತಮೂರ್ತಿ ಅವರ ‘ದಿವ್ಯ’, ಲಂಕೇಶರ ‘ಸಂಕ್ರಾಂತಿ’ ಮತ್ತು ಕಂಬಾರರ ‘ಜೋಕುಮಾರ ಸ್ವಾಮಿ’ ಇವೇ ಮುಂತಾದ ಕೃತಿಗಳಲ್ಲಿ ಮೇಲ್ಜಾತಿಯ ಹೆಣ್ಣು ದಲಿತನೊಂದಿಗೆ ಸಂಬಂಧ ಬೆಳೆಸಿಕೊಳುವುದರ ಮೂಲಕ ದಲಿತನಲ್ಲಿ ಆತ್ಮಾಭಿಮಾನ ಬೆಳೆಸಲು ಕಾರಣಳಾಗುತ್ತಾಳೆ. ಅಂತೆಯೆ ಭಾರತಿಪುರದಲ್ಲೂ ಸಹ ಅಂತಹ ಲೈಂಗಿಕ ಸಂಬಂಧಗಳ ಮೂಲಕ ಸಾಮಾಜಿಕ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಅನಂತಮೂರ್ತಿ ಸೂಚಿಸುತ್ತಾರೆ. ಅನಂತಮೂರ್ತಿ ಅವರ ಇತರ ಕೃತಿಗಳಲ್ಲೂ ಲೈಂಗಿಕತೆ ಹಾಸು ಹೊಕ್ಕಂತೆ ಇರುವುದು ಗಮನಿಸಬಹುದಾಗಿದೆ. ಸಂಸ್ಕೃತ ಮತ್ತು ಪತ್ತೆದಾರಿ ಸಾಹಿತ್ಯದಲ್ಲಿ ಹೇರಳವಾಗಿ ಸಿಗುವ ಶೃಂಗಾರ ಸಾಹಿತ್ಯಕ್ಕಿಂತಲೂ ಇದು ಸಮಾಜದಲ್ಲಿ ಕ್ರಾಂತಿ ಉಂಟುಮಾಡಲು ಬಳಸುವ ತಂತ್ರದಂತಿದೆ. ಅನಂತಮೂರ್ತಿಯವರು ಈ ಕಥೆಯ ನಿರೂಪಣೆಯನ್ನು ಯಾವುದೆ ಮುಚ್ಚು ಮರೆ ಇಲ್ಲದೆ ಮಾಡಿದ್ದಾರೆ. ಮನಸ್ಸಿನ ಆಳದಲ್ಲಿ ಅಡಗಿ ಕುಳಿತ ಕಾಮಾತುರತೆಯನ್ನು ಬಚ್ಚಿಡದೆ ಹೊರಗೆ ಚೆಲ್ಲುತ್ತಾರೆ.
ಈ ಕಥೆಯಲ್ಲಿ ಎದ್ದು ಕಾಣುವ ಒಂದು ತೊಂದರೆ ಎಂದರೆ ಕಥೆಯಲ್ಲಿ ವೈಚಾರಿಕತೆ ಮತ್ತು ಆಧುನಿಕ ಮನೋಭಾವವನ್ನು ಹೊಂದಿರುವವರು ಬ್ರಾಹ್ಮಣರೆ ಆಗಿರುವುದು. ಸ್ವತಃ ಬ್ರಾಹ್ಮಣನಾದ ಜಗನ್ನಾಥನಂತವರು ಇರುತ್ತಾರೊ ಎಂಬ ಸಂಶಯ ಸುಳಿಯದೆ ಇರುವುದಿಲ್ಲ. ಕಥೆಯಲ್ಲಿ ನನಗೆ ಜಗನ್ನಾಥನಲ್ಲಿ ಕಂಡು ಬರುವ ಆದರ್ಶ ಮತ್ತು ತತ್ವಗಳು ಕಸಿವಿಸಿ ಉಂಟುಮಾಡುತ್ತದೆ. ಅವನಲ್ಲಿ ಆ ರೀತಿಯ ಮನೋಭಾವ ಹೇಗೆ ಬೆಳೆಯಿತು ಎನ್ನುವುದರ ಮೇಲೆ ಹೆಚ್ಚು ಬೆಳಕು ಚೆಲ್ಲಿಲ್ಲವೆನಿಸುತ್ತದೆ. ಆ ಊರಿನ ಅತ್ಯಧಿಕ ಶ್ರೀಮಂತರ ಮನೆಯ ವ್ಯಕ್ತಿ, ಇಡೀ ಊರಿನ ಗೌರವಕ್ಕೆ ಪಾತ್ರನಾದವನೂ ಆದ ಜಗನ್ನಾಥನಿಗೆ ತನ್ನ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ಉಳಿಸಿಕೊಳ್ಳಲ್ಲು ಬಲವಾದ ಪ್ರೇರಣೆ ಕಾಣುತ್ತದೆ. ಆದರೆ ಇಂತಹ ವ್ಯಕ್ತಿಯಲ್ಲಿ ಕ್ರಾಂತಿಯ ಭಾವನೆ ಹೇಗೆ ಉಂಟಾಯಿತು? ಹೀಗೆ ಮಾಡುವುದರಿಂದ ಆತ ತನ್ನ ಸವಲತ್ತುಗಳನ್ನೆಲ್ಲ ಕಳೆದುಕೊಳ್ಳಲು ಸಿದ್ಧನಾಗುವುದು ಸಹಜವೆನಿಸುವುದಿಲ್ಲ. ಈ ಸ್ಪುರದ್ರೂಪಿ ಹಣವಂತ ಯುವಕ ಯಾವ ಕಾರಣಕ್ಕಾಗಿ ತನ್ನನ್ನು ಪ್ರೀತಿಯಿಂದ ಕಾಣುವ ಸಂಸಾರವನ್ನು ತ್ಯಜಿಸಲು ಸಿದ್ಧಾಗುತ್ತಾನೆ? ಇಡೀ ಊರೆ ನಂಬಿರುವ ಮಂಜುನಾಥನನ್ನೇ ಇಲ್ಲವಾಗಿಸುವಂತಹ ಆದರ್ಶವಾದಿಯೆ? ಮಹಿಮೆಯಷ್ಟೆ ಅಲ್ಲದೆ ಮಂಜುನಾಥನಿಂದಲೇ ಊರಿನ ಆರ್ಥಿಕ ವ್ಯವಸ್ಥೆ ನಿಂತಿರುವುದು. ಹರಿಜನರು ದೇವಸ್ಥಾನ ಪ್ರವೇಶಿಸುವುದರ ಮೂಲಕ ಮಂಜುನಾಥನ ಮಹಿಮೆಗೆ ಕುಂದು ಬಂದರೆ ಊರಿನ ಜೀವನೋಪಾಯಕ್ಕೆ ಕುತ್ತು ಬಂದಂತೆ. ಆದರೂ ಬಹುಜನರ ಹಿತಾಸಕ್ತಿಯ ಮುಂದೆ ಒಂದು ಸಣ್ಣ ವರ್ಗದ ತೊಂದರೆಗಳು ಗೌಣವಾಗುತ್ತವೆ ಎನ್ನುವುದು ನಿಜ. ಆದರೆ ಈ ರೀತಿಯ ಕ್ರಾಂತಿ ಶತಮಾನಗಳಿಂದ ತುಳಿಸಿಕೊಂಡ ದಲಿತರ ನಡುವಿನಿಂದಲೇ ಹುಟ್ಟಿದ್ದರೆ ಇದನ್ನು ನಂಬಲು ಸುಲಭವಾಗಿರುತ್ತಿತ್ತು. ಹೀಗೆ ಹೇಳುವಾಗ ಭಾರತೀಯ ಸಮಾಜದ ಸುಧಾರಣೆಯುಲ್ಲಿ ಮೇಲ್ಜಾತಿಯವರ ಕೊಡುಗೆ ಬಹಳ ದೊಡ್ಡದು ಎನ್ನುವ ಅರಿವಿದೆ. ಮಹಾತ್ಮ ಗಾಂಧಿ ಮತ್ತು ರಾಜ ರಾಂಮೋಹನ್ ರಾಯ್ ಇಂತಹ ಮಹನಿಯರಲ್ಲಿ ಇಬ್ಬರು.
ಅನಂತಮೂರ್ತಿಯವರು ಸ್ವತಃ ಸಮಾಜದ ಹುಳುಕನ್ನು ಎತ್ತಿ ತೋರಿಸುವ ಮತ್ತು ಅಂತಹ ಸಮಾಜವನ್ನು ಧಿಕ್ಕರಿಸುವ ಚಿಂತನೆ ಉಳ್ಳವರಾಗಿರುವುದನ್ನು ಅವರ ಕಥೆ ಕಾದಂಬರಿಗಳಲ್ಲಿ ಕಾಣಬಹುದು. ಆದ್ದರಿಂದ ಜಗನ್ನಾಥನಂಥ ಆದರ್ಶವಾದಿ ಅವರಿಗೆ ಬಹಳ ಸಹಜವಾಗಿ ಕಾಣಬಹುದು. ಬಹುಜನರಿಗೆ ಅಹಿತಕರ ಎನಿಸುವ ವಿಷಯಗಳನ್ನು ಹೊರ ಚೆಲ್ಲಿ ಅವುಗಳನ್ನು ಚರ್ಚೆಗೆ ಒಳಪಡಿಸುವುದು ಅನಂತಮೂರ್ತಿಯವರ ಗುಣ. ಹೀಗಾಗಿ ಅನಂತಮೂರ್ತಿ ಅವರ ಕಲ್ಪನೆಯಲ್ಲಿ ಜಗನ್ನಾಥ ನಿಜವಾದ ವ್ಯಕ್ತಿಯಾಗಿ ಕಂಡಿರಬಹುದು.
ಭಾರತಿಪುರದಲ್ಲಿ ಜಗನ್ನಾಥನು ಹುಟ್ಟುಹಾಕುವ ಈ ಘರ್ಷಣೆಯಲ್ಲಿ ದೇವಸ್ಥಾನದ ಪುರೋಹಿತರು ಮತ್ತು ವ್ಯಾಪಾರಿಯಾದ ಪ್ರಭುಗಳು ಒಂದು ಪಂಗಡವಾಗಿ ಜಗನ್ನಾಥನ ಕ್ರಾಂತಿಗೆ ತೊಡಕುಂಟುಮಾಡುವುದು ಪುರೋಹಿತಶಾಹಿ ಮತ್ತು ವ್ಯಾಪಾರಿ ಮನೋಭಾವದ ಶಕ್ತಿಗಳು ಹೇಗೆ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅಸ್ಪೃಶ್ಯತೆ ಮತ್ತು ಜಾತೀಯತೆಯನ್ನು ಹುಟ್ಟು ಹಾಕಿ ಬೆಳೆಸಿಕೊಂಡು ಹೋಗುತ್ತಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇನ್ನೊಂದು ರೀತಿಯಲ್ಲಿ ಇದು ಬ್ರಾಹ್ಮಣ ಸಮಾಜ ತನ್ನೊಳಗಿನ ಕುಟಿಲತೆಯನ್ನು ಮತ್ತು ಅಮಾನವೀಯ ತತ್ವಗಳನ್ನು ಜಾಡಿಸಿ ಹೊರಹಾಕುವ ಆಂತರಿಕ ಘರ್ಷಣೆಯೂ ಆಗಿದೆ.
ಕಥೆಯಲ್ಲಿ ಕೆಲವು ಸೂಕ್ಷ್ಮವಾದ ನಡುವಳಿಕೆಗಳನ್ನು ನಾವು ಪಾತ್ರಗಳಲ್ಲಿ ಕಾಣಬಹುದು. ಶ್ರೀಪತಿ ರಾಯರು ಒಬ್ಬ ಗಾಂಧೀವಾದಿಯಾಗಿ ಒಬ್ಬ ರಿಯಲಿಸ್ಟ್ ಆಗಿಯೂ ಬದುಕುವುದು ಒಂದು ಉದಾಹರಣೆ. ಜಗನ್ನಾಥನ ಧ್ಯೇಯಗಳಲ್ಲಿ ಅವರಿಗೆ ನಂಬಿಕೆ ಇದ್ದರೂ ಆ ದ್ಯೇಯಗಳು ವಾಸ್ತವಕ್ಕೆ ದೂರವಾಗಿವೆ ಎಂಬುದನ್ನು ಮನಗಂಡೇ ಆವನಿಗೆ ತಮ್ಮ ಬೆಂಬಲ ನೀಡುತ್ತಿರುತ್ತಾರೆ. ಜಾತಿ ಪದ್ಧತಿ ಎಷ್ಟರ ಮಟ್ಟಿಗೆ ಸಮಾಜದಲ್ಲಿ ಬೇರೂರಿದೆ ಎನ್ನುವುದನ್ನು ಶ್ರೀಪತಿರಾಯರಲ್ಲಿ ಕಾಣಬಹುದು. ಜಾತಿಪದ್ದತಿಯ ವಿರುದ್ದ ಹೋರಾಡಲು ಪಣ ತೊಟ್ಟಿರುವ ಶ್ರೀಪತಿ ರಾಯರೇ ಲಿಂಗಾಯಿತರು ಮತ್ತು ಗೌಡರು ಜಾತಿಯತೆ ಮಾಡುತ್ತಾರೆ ಎಂದು ಹೇಳುವಾಗ ತಾವೆ ಜಾತೀಯ ಪದ್ದತಿಯನ್ನು ಪಾಲಿಸುತ್ತಿದ್ದಾರೆ ಎನ್ನುವ ವಿಪರ್ಯಾಸ ಕಾಣಬಹುದು. ಹೆಚ್ಚಿನ ವಿಪರ್ಯಾಸವೆಂದರೆ ಆ ಪ್ರಾಂತ್ಯದ ಜಿಲ್ಲಾಧಿಕಾರಿ ಸ್ವತಃ ದಲಿತನಾಗಿದ್ದರೂ ಆತನು ತನ್ನ ಜನರ ಹಿತಕಾಪಾಡದೆ ಮೇಲ್ಜಾತಿಯವರ ಜೊತೆಗೂಡಿ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದರಲ್ಲಿ ನಿರತನಾಗಿರುತ್ತಾನೆ. ಮೇಲ್ಜಾತಿಯವರೊಂದಿಗೆ ಘರ್ಷಣೆಯ ನಿಲುವು ತೆಗೆದುಕೊಳ್ಳುವುದೇ ಇಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈತ ತನ್ನ ವ್ಯಕ್ತಿತ್ವವನ್ನೆ ತೊರೆದು ತನ್ನ ಜನರನ್ನೆ ದೂಷಿಸುತ್ತ ಆತ್ಮನಿಂದನೆ ಮತ್ತು ಆತ್ಮದ್ವೇಶ ತೋರಿಸುವುದು ಸಮಾಜದಲ್ಲಿರುವ ಸವಾಲುಗಳಿಗೆ ಸಾಕ್ಷಿಯಾಗಿವೆ.
ಕಥೆಯಲ್ಲಿ ನನಗೆ ಬಹಳ ಆಸಕ್ತಿ ಮೂಡಿಸಿದ ಪಾತ್ರ ಪುರಾಣಿಕರದ್ದು. ಈತನಿಗೆ ತಮ್ಮ ಭದ್ರಕೋಟೆಯಂತಹ ಮನೆಯಲ್ಲಿ ಸದಾ ತಮ್ಮನ್ನೆ ಕೂಡಿಹಾಕಿಕೊಂಡು, ರೇಡಿಯೋ ಮೂಲಕ ಹೊರದೇಶದ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಖಯಾಲಿ. ಬರಿ ಸಮಾಜದ ಹುಳುಕುಗಳ ಬಗ್ಗೆ ಮಾತಾಡುತ್ತ ಉಡಾಫೆ ಹೊಡೆದುಕೊಂಡು ಬಾಳುವ ಈತ ವಿಪರೀತದ ವಾದಗಳನ್ನು ಮಾಡುತ್ತಲೇ ಕ್ರಿಯಾಶೀಲನಾಗದೆ ತಟಸ್ಥವಾಗಿದ್ದುಬಿಡುವುದು ಭಾರತದಲ್ಲಿ ಕಂಡುಬರುವ ಎಲೈಟಿಸ್ಟ್ ವರ್ಗದ ಪ್ರತಿಬಿಂಬವಾಗಿದೆ. ವಿಸ್ಮಯಕಾರಿ ಸಂಗತಿ ಏನೆಂದರೆ ಜಗನ್ನಾಥ ತನ್ನ ಸಮಾಜ ಪರಿವರ್ತನೆಯ ಕಾರ್ಯದಲ್ಲಿ ಎಡವಿದಾಗ ಅವನು ಆಶಿಸುವುದು ಪುರಾಣಿಕರ ಸಹವಾಸ. ಜಗನ್ನಾಥ ಆದರ್ಶದ ಬೆನ್ನು ಹತ್ತಿ ಕೆಳಗೆ ಬಿದ್ದಾಗ ಕಾಲು ಚಾಚಿ ಮಧ್ಯ ಸೇವಿಸುತ್ತ ಅದನ್ನು ಮರೆಯಬೇಕು ಎನಿಸುವುದು ಆತನ ವ್ಯಕ್ತಿತ್ವವನ್ನು ಇನ್ನಷ್ಟು ಆಸಕ್ತಪೂರ್ಣವಾಗುವಂತೆ ಮಾಡಿದೆ ಎನಿಸುತ್ತದೆ. ಜಗನ್ನಾಥನ ಈ ಗುಣ ಆತನ ನಿಜವಾದ ವ್ಯ್ಕಕ್ತಿತ್ವ ಎನಿಸುತ್ತದೆ.
ಸಂಪ್ರದಾಯವಾದಿಯಾದರೂ ತನ್ನ ಮಾನವೀಯತೆಯನ್ನು ಕಾಪಾಡಿಕೊಂಡು ಬಂದ ಚಿಕ್ಕಿಯ ಅಳಲಿನಲ್ಲಿ ಭಾರತೀಪುರದ ಸಮಾಜದ ಅಳಲನ್ನು ಕಾಣಬಹುದು. ಮಾನವರಲ್ಲಿ ಅಂತರ್ಗತವಾಗಿ ಬಂದಿರುವ ಮಾನವೀಯತೆಯನ್ನು ಹೊರತರಲು ಜಗನ್ನಾಥನಂಥವರು ಬರಬೇಕು. ಆದರೆ ಆ ಕಾರ್ಯ ಪಟ್ಟಭದ್ರಹಿತಾಸಕ್ತಿಗಳಿಗೆ ಹಾನಿಯುಂಟು ಮಾಡುವುದರಿಂದ ಅವರು ಅದಕ್ಕೆ ಎಲ್ಲ ರೀತಿಯ ಅಡೆ ತಡೆಗಳನ್ನು ಒಡ್ಡುತ್ತಾರೆ. ಭಾರತದಂತ ಬೃಹತ್ ದೇಶದಲ್ಲಿ ಶತಶತಮಾನಗಳಿಂದ ಬೇರುಬಿಟ್ಟಿರುವ ಸಾಮಾಜಿಕ ಶೋಷಣೆಯನ್ನು ಇಂಥ ಶಕ್ತಿಗಳನ್ನು ಚಾತುರ್ಯದಿಂದ ಬಳಸಿಕೊಳ್ಳುವುದರ ಮೂಲಕ ವಾಸ್ತವಿಕತೆಯ ಚೌಕಟ್ಟಿನಲ್ಲಿ ಹಂತ ಹಂತವಾಗಿ ತೊಡೆದುಹಾಕಬೇಕಾಗಿದೆ. ಈ ರೀತಿಯ ಸಮಾಜ ಪರಿವರ್ತನೆಯ ಕೆಲಸ ಪುನರಾವರ್ತನೆಗೊಳ್ಳುತ್ತಿದ್ದರೆ ಒಂದಲ್ಲ ಒಂದು ದಿನ ಭಾರತಿಪುರದ ಸಮಾಜದಲ್ಲಿ ಸುಧಾರಣೆಯನ್ನು ಕಾಣಬಹುದೇನೊ!
Subscribe to:
Post Comments (Atom)
1 comment:
Good one...
Post a Comment