ಅಣ್ಣಾವ್ರಿಗೆ ಅಲರ್ಜಿ
ಈಗ ನಮ್ಮೂರಲ್ಲಿ ಅಲರ್ಜಿ ಸೀಜನ್ನು. ಹೀಗಿರಲು ನನ್ನ ಸ್ನೇಹಿತ ವಿನಯ್, ವರನಟ, ಕನ್ನಡಿಗರ ಕಣ್ಮಣಿ, ಅಣ್ಣಾವ್ರಿಗೇನಾದ್ರು ಅಲರ್ಜಿ ಆಗಿದ್ರೆ ಹೇಗಿರುತ್ತಿತ್ತು ಅಂತ ವಿಚಾರ ತೆಗೆದ್ರು. ಅ ಪ್ರೇರಣೆಯಿಂದ, 'ಎಲ್ಲೆಲ್ಲಿ ನೋಡಲಿ ಅಕ್ಷೀ ಎನ್ನುತ್ತಿರುವ ಸೀನನ್ನೆ ಕಾಣುವೆ' ಅನಿಸುವ ಈ ವಾತಾವರಣದಲ್ಲಿ ಮೂಡಿದ ಈ ಕಲ್ಪನೆ, ಅಭಿಮಾನಿ ದೇವರುಗಳಿಗೆ ಅರ್ಪಿತ .....
ಬಬ್ರುವಾಹನ: ಏನು ಪಾರ್ಥ, ಆಂ... ಹೆಹೆ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ...ಅಲರ್ಜಿಗಳಿಗೆ ಶರಣಾದ ನಿನಗೆ ಆ ಶಕ್ತಿ ಇನ್ನಿಲ್ಲ.
ಅರ್ಜುನ: ಮದಾಂಧ! ವಸಂತ ಕಾಲ ಬಂದಾಗ ಪರಾಗ ಸ್ಪರ್ಷವಾಗಲೇ ಬೇಕು, ಕಣ್ಣು ಕೆಂಪಾಗಲೇ ಬೇಕು ಎಂದು ತಿಳಿಯದ ಮೂರ್ಖ. ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳ ಲೋಕಗಳಲಿ ಅಲರ್ಜಿಗಳ ಸದೆಬಡಿದ ಈ ಅರ್ಜುನನ ನಾಸಿಕ ಬಲದ ಪರಾಕ್ರಮ ನಿನಗೇನು ತಿಳಿದಿದೆಯೋ
ಬ: ಅಹ್ಹಹ್ಹಹ್ಹ ... ಯಾರು ತಿಳಿಯರು ನಿನ್ನ ನಾಸಿಕಬಲದ ಪರಾಕ್ರಮಾ. ಆ ಆ ಆ ಆ
ಚೈತ್ರದೋಳ್ ಆರ್ಜಿಸಿದ ಆ ನಿನ್ನ ಅಲರ್ಜಿಗಳ ಗೆದ್ದ ಮರ್ಮ..ಆಂ ಆಂ
ಎಲ್ಲದಕೂ ಕಾರಣವೂ ಫ್ರೀ ಕ್ಲಾರಿಟಿನ್ ಪರಮಾತ್ಮ......
ಹಗಲೆರಡು ಇರುಳೆರಡು ಗುಳಿಗೆಗಳು ಮೇ ಸೇರಿ
ನೆಮ್ಮದಿ ತಂದಿತ್ತ ಆ ಮದ್ದು ನಂದನ
ಅದಿಲ್ಲದೇ ಬಂದ ನೀನು ಒಂಟಿ ಸೀನಿಗೆ ಸಮಾನ ಆಂ ಆಂ ಆಂ