ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಿಲ್ಪಿಟಾಸ್‍ನ ಸತ್ಯನಾರಾಯಣ ದೇವಾಲಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಗಳ ಗುಂಪೊಂದು ಕೆಲವು ಕೃತಿಗಳನ್ನು ಮತ್ತು ಕೆಲವು ಭಜನೆಗಳನ್ನು ಹಾಡುವ ಕಾರ್ಯಕ್ರಮವಿತ್ತು. ನನ್ನ ಹನ್ನೊಂದು ವರುಷದ ಮಗಳು ಹಾಡುವವಳಿದ್ದರಿಂದ ಅವಳನ್ನು ಕರೆದುಕೊಂಡು, ನಮ್ಮ ಮನೆ ಮಂದಿಯೆಲ್ಲ ಕಾರಿನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ 96.1 FM ರೇಡಿಯೋದಲ್ಲಿ ಕೇಳಿಬಂದಿದ್ದು ಮಹಿಮಾ ಕ್ರಿಯೇಶನ್ಸ್ ಅವರ ಗಂಧದಗುಡಿ ಕನ್ನಡ ಕಾರ್ಯಕ್ರಮ. ಇಂದು ಗೋಕುಲಾಷ್ಟಮಿ ಪ್ರಯುಕ್ತ ಕೃಷ್ಣನ ಬಗ್ಗೆ ರಸಪ್ರಶ್ನೆ – ಕೃಷ್ಣನಿಗೆ ಅತ್ಯಂತ ಪ್ರಿಯವಾದ ತಿಂಡಿ ಯಾವುದು? ನನಗೆ ಕೂಡಲೆ ಹೊಳೆದದ್ದು ಅವಲಕ್ಕಿ ಎಂಬ ತಿಂಡಿಪದಾರ್ಥ ಅಲ್ಲ! ಬದಲಾಗಿ ಅವಲಕ್ಕಿ ಎಂಬ ಡುಂಡಿರಾಜರ ಈ ಕವಿತೆ.
ಯಾಕೆಂದರೆ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ನೆನಪಿಗೆ ಬಂದರೆ ಅದರ ಹಿಂದೆಯೇ ಬರುತ್ತದೆ ಅವನ ಮತ್ತು ಸುದಾಮನ ಗೆಳೆತನದ ನೆನಪು. ಕಡು ಬಡವನಾದ ಸುದಾಮ, ಶ್ರೀ ಕೃಷ್ಣನನ್ನು ಕಾಣಲು ಅವನ ಆಸ್ಥಾನಕ್ಕೆ ಬಂದಾಗ ಕೇವಲ ಒಂದು ಹಿಡಿ ಅವಲಕ್ಕಿ ತಂದುಕೊಡುತ್ತಾನೆ. ತನ್ನ ಸ್ನೇಹಿತನು ನೀಡಿದ ಈ ಪ್ರೀತಿಯ ಕಾಣಿಕೆಯಿಂದ ಸಂತುಷ್ಟನಾಗಿ ಶ್ರೀ ಕೃಷ್ಣನು ಸುದಾಮನಿಗೆ ಅಷ್ಟೈಷ್ವರ್ಯವನ್ನು ನೀಡಿ ಅವನ ಕಡು ಬಡತನವನ್ನು ನಿವಾರಿಸುತ್ತಾನೆ. ಕಥೆಯ ಈ ಸಾರವನ್ನು ಡುಂಡಿರಾಜರು ಈ ಕೆಲವೇ ಸಾಲುಗಳಲ್ಲಿ ಸೆರೆ ಹಿಡಿದು, ಅವಲಕ್ಕಿ ಪದದೊಂದಿಗೆ PUNಆಟವಾಡಿ ಸೊಗಸಾದ ಹನಿಗವನದ ರಸಪಾಕವನ್ನು ಓದುಗರಿಗೆ ನೀಡಿದ್ದಾರೆ.
ಅವಲಕ್ಕಿ
ಗೆಳೆಯನ ನೋಡಲು
ಹೋದ ಸುಧಾಮ
ಕೊಟ್ಟನು ಹಿಡಿ ಅವಲಕ್ಕಿ
ಸಿಕ್ಕಿತು ಬದಲಿಗೆ
ಅಷ್ಟೈಶ್ವರ್ಯ
ನಿಜವಾಗಿಯೂ ಅವ ’ಲಕ್ಕಿ’
ನಾನಂತು ಡುಂಡಿರಾಜರ ಹನಿಗವನಗಳನ್ನು ಓದುವುದಷ್ಟೆ ಅಲ್ಲದೆ, ನಾನು ಓದಿದ್ದನ್ನು ನನ್ನ ಸ್ನೇಹಿತರೊಂದಿಗೆ ಅಥವಾ ಸಂತೋಷಕೂಟಗಳಲ್ಲಿ ಇತರ ಕನ್ನಡಿಗರೊಂದಿಗೆ ಹಂಚಿಕೊಂಡು ಆನಂದಿಸಿದ್ದೇನೆ. ಇವರು ನಾಟಕಗಳನ್ನು ಮತ್ತು ಆಂಕಣ ಬರಹಗಳನ್ನು ಸಹ ಬರೆದು ಪ್ರಸಿದ್ಧರಾಗಿದ್ದಾರೆ. ಇವರು ರಚಿಸಿದ ನಾಟಕ ’ಕೊರಿಯಪ್ಪನ ಕೊರಿಯೋಗ್ರಫಿ’, ೨೦೧೦ ಮೇನಲ್ಲಿ ಸ್ಯಾನ್ ಹೊಸೆಯಲ್ಲಿ ಪ್ರದರ್ಶನಗೊಂಡಿತು, ಶರ್ಮಿಳಾ ವಿದ್ಯಾಧರ ಅವರು ನಿರ್ದೇಶಿಸಿದ ಈ ನಾಟಕದಲ್ಲಿ ಕೊರಿಯಪ್ಪನ ಪಾತ್ರವನ್ನು ನಿರ್ವಹಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ದೊಡ್ಡ ಭಾಗ್ಯ. ಈ ನಾಟಕದಲ್ಲಿ ಕೊರಿಯಪ್ಪನಾಗಿ ನಾನು ಡುಂಡಿರಾಜರ ಮಾತುಗಳನ್ನು ಆಡುತ್ತ, ಅವರ ಶುದ್ಧವಾದ, ಅದ್ಭುತವಾದ ಹಾಸ್ಯವನ್ನು ಪ್ರದರ್ಶಿಸುತ್ತ ನಟಿಸಿದ ಅನುಭವ ನನ್ನ ಪಾಲಿಗೆ ಒಂದು ಮಹತ್ ಘಟನೆ. ಹೀಗಾಗಿ ನನಗೆ ಡುಂಡಿರಾಜರ ಮೇಲೆ ಅಪಾರವಾದ ಅಭಿಮಾನ ಬೆಳೆಸಿಕೊಂಡಿದ್ದೇನೆ.
ಕಳೆದು ತಿಂಗಳು ನಾನು ಭಾರತಕ್ಕೆ ಪ್ರವಾಸ ಹೋದಾಗ ಅವರನ್ನು ಫೇಸ್‍ಬುಕ್ಕಿನಲ್ಲಿ ಸಂಪರ್ಕಿಸಿ ಅವರನ್ನು ಬೇಟಿಯಾಗುವ ಆಶಯವನ್ನು ತಿಳಿಸಿದೆ. ಅವರು ಬಹಳ ಸಂತೋಷದಿಂದ ಅವರನ್ನು ಭೇಟಿಯಾಗಲು ಅನುಕೂಲವಾಗುವಂತೆ ವಿವರಗಳನ್ನು ನೀಡಿದರು. ಮತ್ತು ನಾನು ಅವರನ್ನು ಭೇಟಿ ಮಾಡಲು ಹೋದಾಗ ಬಹಳ ಆತ್ಮೀಯತೆಯಿಂದ ಮಾತನಾಡಿಸಿದರು. ಅವರನ್ನು ಭೆಟ್ಟಿಯಾಗಿ ಅವರೊಂದಿಗೆ ಕೆಲ ಹೊತ್ತು ಮಾತನಾಡಿದ್ದು ನನಗೆ ಬಹಳ ಸಂತೋಷವಾಯಿತು.
ಈ ಮೊದಲೇ ತಿಳಿಸಿದ ರೇಡಿಯೋ ಕಾರ್ಯಕ್ರಮ ಅಮೇರಿಕದಲ್ಲಿ ನೇರ ಪ್ರಸಾರವಾಗುತ್ತದೆ. ಇಂದಿನ ಗೋಕುಲಾಷ್ಟಮಿ ವಿಶೇಷ ಕಾರ್ಯಕ್ರಮದ ಸಮಯದಲ್ಲಿ ನಾನು ಕರೆ ಮಾಡಿ ಕೃಷ್ಣನ ಪ್ರಿಯವಾದ ತಿನಿಸು ಅವಲಕ್ಕಿ ಎಂದು ಸರಿಯುತ್ತರ ನೀಡಿದ್ದಷ್ಟೇ ಅಲ್ಲದೆ ಕೃಷ್ಣ ಸುದಾಮರ ಬಗ್ಗೆ ಡುಂಡಿರಾಜರು ಬರೆದ ಅವಲಕ್ಕಿ ಕವಿತೆಯ ಬಗ್ಗೆ ಹೇಳಿ ಆ ಕವಿತೆಯನ್ನು ವಾಚಿಸಿದೆ.
ನಂತರ ಹಾಗೆಯೆ ಸ್ವಲ್ಪ ಯೋಚಿಸಿದಾಗ ಡುಂಡಿರಾಜರ ಇನ್ನು ಕೆಲವು ಹನಿಗವನಗಳಲ್ಲಿ ಶ್ರೀ ಕೃಷ್ಣ ಕಾಣಿಸಿಕೊಳ್ಳುತ್ತಾನಲ್ಲ ಎಂದು ನೆನಪಾಯಿತು. ಡುಂಡಿರಾಜರ ಈ ಕವನಗಳನ್ನು ನೆನೆಪಿಸಿಕೊಂಡು ಈ ಬಾರಿಯ ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ಯಾಕೆ ಆಚರಿಸಬಾರದು ಎನಿಸಿತು. ಹಾಗಾಗಿ, ಹನಿಗವನದ ಸಾಮ್ರಾಟರು ಎಂದು ಕರೆಸಿಕೊಳ್ಳುವ ಡುಂಡಿರಾಜರ ಕೆಲವು ಹನಿಗವನಗಳು ನಿಮ್ಮ ಸವಿಯುವಿಕೆಗಾಗಿ.
ಚಕ್ರ
ಎಷ್ಟೊಂದು ರುಂಡಗಳ
ಚಂಡಾಡಿತ್ತು ಅಂದು
ಮುರಾರಿಯ ಚಕ್ರ.
ಇಂದು ಆ ಕಾರ್ಯ
ನಿರ್ವಹಿಸುತ್ತಿದೆ
ಬಸ್ಸು, ಕಾರು,
ಲಾರಿಯ ಚಕ್ರ
ಈಗಿನವರು
ರಾಧೆಯ ಗೆದ್ದನು ಆ ಗೊಲ್ಲ
ರುಕ್ಮಿಣಿಯ ಕದ್ದನು ಆ ಗೊಲ್ಲ
ಹದಿನಾರು ಸಾವಿರ
ಮಡದಿಯರನ್ನು
ಸಂಭಾಳಿಸಿದನು ಆ ಗೊಲ್ಲ
ಈಗಿನವರಿಂದ
ಆಗೊಲ್ಲ
ಈ ರಾಧೆ
ಹತಾಶಳಾಗದೆ
ಕಾಯುತ್ತಿರುವಳು
ಪಾರ್ಕಿನಲ್ಲಿ ಈ ರಾಧೆ
ಕೃಷ್ಣ ತಪ್ಪಿದರೆ
ರಾಮರೂ ಇದ್ದಾರೆ
ಎಂಬುದೆ ಅವಳ ಇರಾದೆ
ನನಗೆ
ಕೃಷ್ಣನಿಗೆ ಸಾವಿರಾರು
ಹೆಂಡಿರಿದ್ದರಂತೆ
ನನಗೆ ಒಬ್ಬಳೆ
ಆದರೂ
ಸಾವಿರಾರು ಚಿಂತೆ
ಗೀತೆಯಲ್ಲಿ
ಗೀತೆಯಲ್ಲಿ ಕೃಷ್ಣ
ಹೇಳಿದ್ದಾನೆ
ಧರ್ಮದ ದಾಸ್ತಾನು
ಖಾಲಿಯಾದಾಗಲೆಲ್ಲ
ಅವ
ತರಿಸುತ್ತಾನೆ